ವಾಲ್ಟೇರ್
	1694-1778. ಪ್ರಸಿದ್ಧ ಫ್ರೆಂಚ್ ಬರೆಹಗಾರ, ವಿಮರ್ಶಕ, ತತ್ತ್ವಜ್ಞಾನಿ ಹಾಗೂ ದಾರ್ಶನಿಕ. ಈತ ಯುಗಪ್ರವರ್ತಕ ವ್ಯಕ್ತಿಯಾಗಿದ್ದುದ ರಿಂದ ಇವನ ಕಾಲವನ್ನು ವಾಲ್ಟೇರ್‍ಯುಗ ಎಂದು ಕರೆಯಲಾಗಿದೆ. ಈತ 1694 ನವೆಂಬರ್ 24ರಂದು ಪ್ಯಾರಿಸ್‍ನಲ್ಲಿ ಜನಿಸಿದ. ಇವನ ಪೂರ್ಣ ಹೆಸರು ಫ್ರಾಂಕಾಯ್ಸ್ ಮಾರಿ ಅರೂಟ್. ಜೆಸೂಯಿಟ್ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಯಿತು. ಕಾನೂನು ಅಧ್ಯಯನದ ಕಡೆ ಸ್ವಲ್ಪ ಆಸಕ್ತಿಯಿದ್ದುದರಿಂದ 16ನೆಯ ವಯಸ್ಸಿಗೆ ಶಾಲೆ ಬಿಟ್ಟ. ಅನಂತರ ಶ್ರೀಮಂತರ ಗುಂಪಿನೊಡನೆ ಸ್ನೇಹ ಬೆಳೆಸಿದ. ಈತನ ಕುಶಾಗ್ರಮತಿ, ಪದ್ಯರಚನ ಸಾಮಥ್ರ್ಯ, ವಾಕ್ಪಟುತ್ವಗಳು ಜನರನ್ನು ಆಕರ್ಷಿಸುತ್ತಿದ್ದುವು. ಫ್ರಾನ್ಸಿನ ಸರ್ಕಾರ ಹಾಗೂ ಚರ್ಚುಗಳಲ್ಲಿಯ ಲೋಪದೋಷಗಳನ್ನು ತನ್ನ ಬರೆವಣಿಗೆ ಮೂಲಕ ಟೀಕಿಸಿದ ಎಂಬ ಕಾರಣಕ್ಕೆ ಇವನನ್ನು ಬ್ಯಾಸ್ಟಿಲ್ ಸೆರೆಮನೆಗೆ ದೂಡಲಾಯಿತು(1717). ಸೆರೆಮನೆಯಲ್ಲಿದ್ದಾಗ ಒಡಿಪೆ ಎಂಬ ದುರಂತನಾಟಕ(ಆ ಕಾಲದ ಅತ್ಯತ್ತಮ ನಾಟಕಕಾರನೆಂದು ಯಶಸ್ಸು ತಂದುಕೊಟ್ಟ ಕೃತಿ) ಹಾಗೂ ದೊರೆ ಹೆನ್ರಿ Iಗಿ ಬಗ್ಗೆ ಲ ಹೆನ್ರಿಡ್ ಎಂಬ ಮಹಾಕಾವ್ಯ ಬರೆದ.

	ಈತ 23ನೆಯ ವಯಸ್ಸಿಗೆ ಕವಿಯಾಗಿ, ಚಿತ್ರಕಾರನಾಗಿ, ನಾಟಕಕಾರನಾಗಿ ಪ್ರಸಿದ್ಧನಾದ. 1725ರ ಹೊತ್ತಿಗೆ ಮೂರು ನಾಟಕಗಳು ಯಶಸ್ವಿಯಾಗಿ ಪ್ರದರ್ಶನಗೊಂಡು ಇವನ ಕೀರ್ತಿ ಇಮ್ಮಡಿಸಿ 15ನೆಯ ಲೂಯಿ ದೊರೆಯಿಂದ ಸನ್ಮಾನಿತನಾದ. ಆದರೆ ಶೆವರ್ಲಿ ಡಿ ರೊಹನ್ ಎಂಬ ಶ್ರೀಮಂತನ ಆಗ್ರಹಕ್ಕೆ ತುತ್ತಾಗಿ ಗಡಿಪಾರಾದ (1726-29). ಈ ಅವಧಿಯಲ್ಲಿ ಈತ ರಾಜಕೀಯ ಹಾಗೂ ಧಾರ್ಮಿಕ ಸ್ವಾತಂತ್ರ್ಯವಿದ್ದ ಇಂಗ್ಲೆಂಡಿನಲ್ಲಿದ್ದ. ಇಲ್ಲಿ ಅಲೆಕ್ಸಾಂಡರ್ ಪೋಪ್, ಜೊನಾಥ್ನ್ ಸ್ವಿಫ್ಟ್‍ರನ್ನು ಭೇಟಿಯಾದ. ತತ್ತ್ವಶಾಸ್ತ್ರಜ್ಞ ಜಾನ್‍ಲಾಕ್ ಹಾಗೂ ಐಸಾಕ್ ನ್ಯೂಟನ್ನರ ವಿಚಾರಧಾರೆ ಗಳಿಂದ ಆಕರ್ಷಿತನಾದ. ಕವಿಯಾಗಿ ಇಂಗ್ಲೆಂಡಿಗೆ ಹೋದ ಈತ ತತ್ತ್ವಜ್ಞಾನಿಯಾಗಿ ಫ್ರಾನ್ಸಿಗೆ ಹಿಂದಿರುಗಿದ(1729).

	ಹಿಸ್ಟೊರಿ ಆಫ್ ಚಾಲ್ರ್ಸ್ ಘಿII (1731), eóÉೈರ್(1732), ಲೆಟರ್ಸ್ ಕನ್‍ಸರ್ನಿಂಗ್ ದಿ ಇಂಗ್ಲಿಷ್ ನೇಷನ್ ಅಪಿಯರ್ಡ್ ಇನ್ ಇಂಗ್ಲೆಂಡ್ (1733, ಈ ಕೃತಿ ಅನಂತರ ಫಿಲಸಾಫಿಕಲ್ ಲೆಟರ್ಸ್ ಎಂಬ ಹೆಸರಿನಲ್ಲಿ ಪ್ರಕಟಗೊಂಡಿತು) ಕೃತಿಗಳನ್ನು ಪ್ರಕಟಿಸಿದ. ಮೂರನೆಯ ಪುಸ್ತಕದಲ್ಲಿ ಇಂಗ್ಲೆಂಡಿನ ಸಂಪ್ರದಾಯಗಳು, ಸಂಸ್ಥೆಗಳು ಹಾಗೂ ವಿಚಾರಸರಣಿಗಳನ್ನು ಹೇಳುತ್ತಲೇ ಫ್ರಾನ್ಸನ್ನು ಅಪರೋಕ್ಷವಾಗಿ ಟೀಕಿಸಿದ ಕಾರಣ ಇದನ್ನು ಫ್ರಾನ್ಸಿನಲ್ಲಿ ಬಹಿಷ್ಕರಿಸಲಾಯಿತು. 1734-49 ಅವಧಿಯಲ್ಲಿ ತತ್ತ್ವಶಾಸ್ತ್ರದ ಬಗೆಗೆ ಅನೇಕ ಪ್ರಬಂಧಗಳನ್ನೂ ನ್ಯೂಟನ್ನನ ಬಗೆಗೆ ಎರಡು ಕೃತಿಗಳನ್ನೂ ಕೆಲವು ಪದ್ಯಗಳನ್ನೂ ಬರೆದ. ಜûಡಿಗ್(1747), ಮೈಕ್ರೊಮೇಗಸ್(1752), ನ್ಯಾಚುರಲ್ ಲಾ (1756), ಕ್ಯಾಂಡಿಡ್(1759), ಯೂನಿವರ್ಸಲ್ ಹಿಸ್ಟೊರಿ (1759-66), ಐರಿನ್(1778)-ಈತನ ಇನ್ನಿತರ ಕೃತಿಗಳು.

	ಇವನ ಅಭಿಪ್ರಾಯದಲ್ಲಿ ಧರ್ಮಸಂಸ್ಥೆ ಅಥವಾ ಚರ್ಚ್ ಎಂದರೆ ಅಂಧಶ್ರದ್ಧೆಗಳನ್ನು ಸೃಷ್ಟಿಸುವ ಸಾಧನ, ವಿಚಾರ ಸ್ವಾತಂತ್ರ್ಯದ ವಿರೋಧಿ ಶಕ್ತಿ, ಮುಗ್ಧ ಜನತೆಯನ್ನು ಹಿಂಸಿಸುವ ಅಸಹನೆಯ ಸ್ಥಾನ, ಸಂಕುಚಿತ ಹಾಗೂ ಮತಾಂಧತೆಗಳನ್ನು ಬೆಂಬಲಿಸುವ ಸಂಸ್ಥೆ. ಇವನ ಬರೆಹಗಳಲ್ಲಿ ಧಾರ್ಮಿಕ ಸಹನೆ ಮತ್ತು ಆರ್ಥಿಕ ಭದ್ರತೆಗೆ ಪ್ರಾಮುಖ್ಯ ನೀಡಲಾಗಿದೆ. ಮನುಷ್ಯನ ಜನ್ಮಸಿದ್ಧ ಹಕ್ಕುಗಳಿಗಾಗಿ ಈತ ಹೋರಾಟ ಮುಂದುವರಿಸಿದ. ಚಿತ್ರಹಿಂಸೆಗೆ ಒಳಗಾದವರ ಪರವಾಗಿ ಹೋರಾಟ ಮಾಡಿದುದಲ್ಲದೆ ಎಲ್ಲ ಬಗೆಯ ಶಿಕ್ಷೆಗಳನ್ನೂ ತೆಗೆದುಹಾಕಬೇಕೆಂದು ತನ್ನ ಬರೆಹಗಳ ಮೂಲಕ ವಾದಿಸಿದ. ಇಡೀ ದೇಶದಲ್ಲಿ ಏಕರೀತಿ ತೆರಿಗೆ, ಏಕರೀತಿ ಕಾನೂನುಗಳಿರಬೇಕೆಂದು, ಎಲ್ಲ ಧಾರ್ಮಿಕ ಸಂಸ್ಥೆಗಳೂ ಆ ದೇಶದ ಕಾನೂನಿನ ವ್ಯಾಪ್ತಿಗೆ ಒಳಪಡಬೇಕೆಂದು ಹೇಳಿದ. ಸ್ವಾತಂತ್ರ್ಯದಲ್ಲಿ ನಂಬಿಕೆಯಿಡದಿರುವುದು ಮಾನವ ಸಮಾಜದ ಎಲ್ಲ ಸಂಬಂಧವನ್ನು ನಾಶಮಾಡಿದಂತೆ ಎಂದು ಅಭಿಪ್ರಾಯಪಟ್ಟ.

	ಇವನು ರಾಜಕೀಯ ಸಿದ್ಧಾಂತಿಯಾಗದಿದ್ದರೂ ಸರ್ಕಾರದ ದೋಷಗಳನ್ನು ಟೀಕಿಸುತ್ತಾ ರಾಜಪ್ರಭುತ್ವದ ಬಗ್ಗೆ ಜನರಲ್ಲಿ ಗೌರವ ಕಡಿಮೆಮಾಡಿದ. ಆದರೆ ಇವನು ರಾಜಪ್ರಭುತ್ವವನ್ನು ಒಂದು ಸಂಸ್ಥೆಯಾಗಿ ಗೌರವಿಸುತ್ತಿದ್ದ; ಕಡೆತನಕ ದೊರೆತನದ ಬಗ್ಗೆ ಗೌರವ ಉಳಿಸಿಕೊಂಡೇ ಬಂದ. ಪ್ರಗತಿಪರ ದೊರೆಗಳು ಮುನ್ನಡೆಗೆ ಅತ್ಯಗತ್ಯವೆಂದು ಭಾವಿಸಿದ. ಕಲ್ಯಾಣಕಾರಕವಾದ ನಿರಂಕುಶ ಪ್ರಭುತ್ವ ಇವನ ಕಲ್ಪನೆಯ ಆದರ್ಶ ಸರ್ಕಾರವಾಗಿತ್ತು. ಇವನು ಪ್ರಜಾಪ್ರಭುತ್ವವಾದಿಯಾಗಿರಲಿಲ್ಲ. ನೂರು ಇಲಿಗಳಿಂದ ಆಳಿಸಿಕೊಳ್ಳವುದಕ್ಕಿಂತ ಒಂದು ಹುಲಿಯಿಂದ ಆಳಿಸಿಕೊಳ್ಳಲು ಇಚ್ಛಿಸುತ್ತೇನೆ ಎಂದಿದ್ದಾನೆ. ಇವನಿಗೆ ಸರ್ಕಾರದ ಗುಣಲಕ್ಷಣಗಳನ್ನು ಬದಲಿಸಬೇಕೆಂಬ ಮನಸ್ಸಿರಲಿಲ್ಲ. ಈತ ಬಯಸಿದ್ದು ಸಾಮಾಜಿಕ ಸ್ವಾತಂತ್ರ್ಯವನ್ನು. ಪ್ರತಿಯೊಬ್ಬ ಮಾನವನಿಗೂ ತನ್ನ ಇಚ್ಛೆಯಂತೆ ನಡೆಯುವ, ಆಲೋಚಿಸುವ, ಮಾತನಾಡುವ, ಬದುಕುವ ಹಾಗೂ ಬರೆಯುವ ಸ್ವಾತಂತ್ರ್ಯವಿರಬೇಕೆಂದ. ಸ್ವಾತಂತ್ರ್ಯವೊಂದೇ ಸಾರ್ವತ್ರಿಕಸತ್ಯ ಎಂದು ಹೇಳಿದ. ಸ್ವಾತಂತ್ರ್ಯವೇ ಎಲ್ಲ ಪ್ರಗತಿಯ ಆಧಾರಶಕ್ತಿ, ಅದರಿಂದ ಮಾತ್ರ ವಿವೇಚನಾ ಶಕ್ತಿ ಬೆಳೆಯಲು ಸಾಧ್ಯ ಎಂದು ಪ್ರತಿಪಾದಿಸಿದ. ಇವನ ತತ್ತ್ವಗಳು ಫ್ರಾನ್ಸಿನ ಮಹಾಕ್ರಾಂತಿಯ ಮೈಲುಗಲ್ಲುಗಳಾದುವು. ಇವನು 1778 ಮೇ 30ರಂದು ನಿಧನಹೊಂದಿದ.	
(ಡಿ.ಎನ್.ಎ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ